ಬ್ಯಾಂಟಿಂಗ್, ಫ್ರೆಡ್ರಿಕ್ ಗ್ರಾಂಟ್
1891-1941. ಕೆನಡ ದೇಶದ ವೈದ್ಯವಿಜ್ಞಾನಿ. ಚಾರಲ್ಸ್ ಬೆಸ್ಟ್ ಎಂಬ ವೈದ್ಯವಿದ್ಯಾರ್ಥಿಯೊಡನೆ ನಾಯಿಗಳ ಮೇದೋಜೀರಕಾಂಗದ ಮೇಲೆ ಪ್ರಾಯೋಗಿಕ ವ್ಯಾಸಂಗ ನಡೆಸಿ ಇನ್ಸುಲಿನ್ನನ್ನು ಶೋಧಿಸಿ ಮಧುಮೇಹ ರೊಗಕ್ಕೆ ಯುಕ್ತ ಚಿಕಿತ್ಸೆ ಒದಗಿಸಿಕೊಟ್ಟ. ಜನನ ಆಂಟೇರಿಯೊ ಪ್ರಾಂತ್ಯದ ಅಲಿಸನ್, 14-11-1891. ಕ್ರೈಸ್ತಮತ ಧರ್ಮಶಾಸ್ತ್ರ ಓದುವ ಉದ್ದೇಶದಿಂದ ಕಾಲೇಜು ಸೇರಿದರೂ (1911) ವೈದ್ಯನಾಗುವ ಬಯಕೆಯಿಂದ ವೈದ್ಯ ವಿದ್ಯಾರ್ಥಿಯಾಗಿ (1912) ಪದವಿ ಗಳಿಸಿದ (1916). ಒಂದನೆಯ ಮಹಾಯುದ್ಧದಲ್ಲಿ ಸೈನ್ಯದ ಮೆಡಿಕಲ್ ಕೋರ್ ಸೇರಿ ಇಂಗ್ಲೆಂಡಿಗೆ ಹೋಗಿ ಶಸ್ತ್ರ ಚಿಕಿತ್ಸೆಯಲ್ಲಿ ವಿಶೇಷ ಅನುಭವ ಪಡೆದ. ಇವನ ಧೈರ್ಯಕ್ಕಾಗಿ ಇವನಿಗೆ ಮಿಲಿಟರಿ ಕ್ರಾಸ್ ದೊರೆಯಿತು. 1919ರಲ್ಲಿ ಊರಿಗೆ ಮರಳಿ 1920ರಲ್ಲಿ ಆಂಟೇರಿಯೊ ಪ್ರಾಂತ್ಯದ ಲಂಡನ್ನಿನಲ್ಲಿ ವೈದ್ಯವೃತ್ತಿ ಪ್ರಾರಂಭಿಸಿದ.

	ಈತನ ಸಹಪಾಠಿಯೊಬ್ಬ ಸಿಹಿಮೂತ್ರ ರೋಗದಿಂದ ನರಳಿ ಸತ್ತಾಗಿನಿಂದ ಈ ಕಾಯಿಲೆಗೆ ಔಷಧಿ ಶೋಧಿಸುವ ಬಗೆಗೆ ಯೋಚಿಸತೊಡಗಿದ. ಆಗ ಪ್ಯಾಂಕ್ರಿಯಾಸಿಗೂ (ಮೇದೋಜೀರಕಾಂಗ) ಸಿಹಿಮೂತ್ರ ರೋಗಕ್ಕೂ ಇರುವ ಸಂಬಂಧ ಗೊತ್ತಿತ್ತು. ಆದರೂ ಇನ್ಸುಲಿನ್ ಎಂದು ಈಗ ಪ್ರಸಿದ್ಧವಾಗಿರುವ ಸಸಾರಜನಕ ರಾಸಾಯನಿಕವನ್ನು ಬೇರ್ಪಡಿಸುವ ಪ್ರಯೋಗಗಳು ಫಲಕಾರಿಯಾಗಿರಲಿಲ್ಲ. ಈ ಗ್ರಂಥಿಯ ಅಸಿನಾರ್ ಕೋಶಗಳಿಂದ ತಯಾರಾದ ಜೀರಕ ರಸಗಳಿಂದ ಇನ್ಸುಲಿನ್ ನಾಶವಾಗಿಬಿಡುತ್ತಿತ್ತು. ಅಸಿನಾರ್ ಕೋಶಗಳನ್ನು ಮಾತ್ರ ನಾಶಮಾಡಿ ಅನಂತರ ಇನ್ಸುಲಿನನ್ನು ಪ್ರತ್ಯೇಕಿಸಬಹುದು ಎಂಬುದು ಇವನಿಗೆ ಹೊಳೆದು ಈ ಪ್ರಯೋಗವನ್ನು ಮಾಡಲು ಟೊರಂಟೊದಲ್ಲಿ ದೇಹಕ್ರಿಯಾ ವಿಜ್ಞಾನದ ಪ್ರಾಧ್ಯಾಪಕನಾಗಿದ್ದ ಜೆ.ಜೆ. ಮ್ಯಾಕ್ಲಿಯಾಡನ ಸಹಾಯ ಕೇಳಿದ. ಬ್ಯಾಂಟಿಂಗನಿಗೆ ಸಂಶೋಧನಾ ಮಾರ್ಗಗಳಲ್ಲಿ ಸಾಕಷ್ಟು ಪರಿಶ್ರಮ ಇಲ್ಲದುದರ ಕಾರಣ ಮೊದಲು ಉತ್ತೇಜನ ದೊರೆಯಲಿಲ್ಲ. ಆದರೂ ಇವನ ಉತ್ಸಾಹ ಗಮನಿಸಿ ಮ್ಯಾಕ್ಲಿಯಾಡ್ ತನ್ನ ಪ್ರಯೋಗಶಾಲೆಯನ್ನು ಕೇವಲ ಎಂಟು ವಾರಗಳಷ್ಟು ಕಾಲ ಉಪಯೋಗಿಸಿಕೊಳ್ಳಲು ಅನುಮತಿ ಕೊಟ್ಟ. ಬ್ಯಾಂಟಿಂಗ್ ತನಗೆ ಸಹಾಯಕನಾಗಿ ಆಗ ಇನ್ನೂ ವಿದ್ಯಾರ್ಥಿಯಾಗಿದ್ದ ಸಿ.ಎಚ್.ಬೆಸ್ಟ್ ಎಂಬಾತನನ್ನು ಕಾಯ್ದುಕೊಂಡ.

	ಇವರು ಪ್ಯಾಂಕ್ರಿಯಾಸಿನ ಜೀರಕರಸನಾಳವನ್ನು ಶಸ್ತ್ರಕ್ರಿಯೆಯ ಮೂಲಕ ಕಟ್ಟಿ ಅಸಿನಾರ್ ಕೋಶಗಳ ಕಾರ್ಯವನ್ನು ಕುಂಠಿತಗೊಳಿಸಿದರು. ಅನಂತರ ಪ್ಯಾಂಕ್ರಿಯಾಸನನ್ನು ಈಚೆಗೆ ತೆಗೆದು ಶೀತಲ ಉಪ್ಪುದ್ರಾವಣ, ದುರ್ಬಲ ಆಮ್ಲ ಅಥವಾ ಆಲ್ಕೊಹಾಲ್ ಹಾಕಿ, ಅರೆದು ಬಂದ ರಸವನ್ನು ಸಿಹಿಮೂತ್ರರೋಗ ಹೊಂದಿದ ನಾಯಿಗಳಿಗೆ ಚುಚ್ಚುಮದ್ದಿನ ಮುಖಾಂತರ ಕೊಟ್ಟರು. ಆಗ ರಕ್ತದಲ್ಲಿಯ ಗ್ಲೂಕೋಸ್ ಮಟ್ಟ ಕಡಿಮೆಯಾಯಿತು. ಅಂದರೆ ಸಿಹಿಮೂತ್ರರೋಗ ತಡೆಯಲು ದನ ಅಥವಾ ಇತರ ಪ್ರಾಣಿಗಳ ಪ್ಯಾಂಕ್ರಿಯಾಸಿನಿಂದ ಈ ತೆರನಾಗಿ ಇನ್ಸುಲಿನನ್ನು ಪಡೆಯಬಹುದು ಎಂದಾಯಿತು. ತಾವು ಪತ್ತೆ ಹಚ್ಚಿದ ಈ ವಿಷಯವನ್ನು 1921 ನವಂಬರ್ 14ರಂದು ಟೊರೊಂಟೊ ವಿಶ್ವವಿದ್ಯಾಲಯದ ವೈದ್ಯ ಸಂಘದಲ್ಲಿ ಘೋಷಿಸಿ ಮುಂದೆ ಪ್ಯಾಂಕ್ರಿಯಾಸಿನ ಅಂತಃಸ್ರಾವ ಎಂಬ ಹೆಸರಿನ ಲೇಖನವನ್ನು ಜರ್ನಲ್ ಆಫ್ ಲ್ಯಾಬೊರೇಟರಿ ಅಂಡ್ ಕ್ಲಿನಿಕಲ್ ಮೆಡಿಸಿನ್ ಎಂಬುದರಲ್ಲಿ ಪ್ರಕಟಪಡಿಸಿದರು. ಇನ್ನುಳಿದ ಕೆಲಸಗಳಲ್ಲಿ-ಬಳಕೆಗೆ ಯೋಗ್ಯವಾಗುವಷ್ಟು ಇನ್ಸುಲಿನನ್ನು ಶುದ್ಧರೂಪಕ್ಕೆ ತರುವುದು, ಅದು ಎಷ್ಟು ಇದೆ ಎಂಬ ಅಳತೆ ಮಾಡುವುದು, ಔಷಧಿ ತಯಾರಿಕೆಯ ಮಾರ್ಗಗಳು ಇತ್ಯಾದಿ-ಕಾಲಿಫ್ ಮತ್ತು ಮ್ಯಾಕ್ಲಿಯಾಡ್ ಇವರು ಜಯಶೀಲರಾದರು. ಈ ಅದ್ಭುತ ಸಾಧನೆಗೆ 1921ರಲ್ಲಿ ಬ್ಯಾಂಟಿಂಗ್ ಮತ್ತು ಮ್ಯಾಕ್ಲಿಯಾಡ್ ಅವರಿಗೆ ನೊಬೆಲ್ ಪಾರಿತೋಷಿಕ ದೊರೆಯಿತು. ಇವರು ತಮ್ಮ ಜೊತೆ ಕೆಲಸಮಾಡಿದ ಬೆಸ್ಟ್ ಮತ್ತು ಕಾಲಿಫ್ ಇವರೊಂದಿಗೆ ಅನುಕ್ರಮವಾಗಿ ತಮ್ಮ ಬಹುಮಾನದ ಅಧರ್À ಮೊಬಲಗನ್ನು ಹಂಚಿಕೊಂಡರು.

	ಬ್ಯಾಂಟಿಂಗನ ಉಳಿದ ಮುಖ್ಯ ಸಂಶೋಧನೆಗಳು ಹಲವಾರು ಇವೆ. ಅವು ಏಡಿಗಂತಿ, ಸಿಲಿಕೋಸಿಸ್, ಅಡ್ರೀನಲ್ ಗ್ರಂಥಿಯ ಸ್ರಾವಗಳು, ಅಲ್ಲದೆ ಆಕಾಶಯಾನ ವೈದ್ಯವಿಜ್ಞಾನಕ್ಕೆ ಸಂಬಂಧಪಟ್ಟವು. ಇವಲ್ಲದೆ ಗಣಿಗಳಲ್ಲಿಯ ವಾಯುವನ್ನು ದೂಳಿಲ್ಲದಂತೆ ಮಾಡಿ ಉಸಿರಾಡಲು ಯೋಗ್ಯವಾಗುವಂತೆ ಮಾಡುವ ಉಪಕರಣವನ್ನು ಅವರು ರಚಿಸಿದರು. ವೈದ್ಯವಿಜ್ಞಾನದಲ್ಲಿ ಇವರ ಈ ಸಂಶೋಧನೆಗಳಿಗಾಗಿ ಕೆನಡಾ ಸರ್ಕಾರ ಇವರಿಗೆ 7500 ಡಾಲರುಗಳ ವರ್ಷಾಶನ ಕೊಟ್ಟಿತು. ಒಂಟೇರಿಯಾ ಸರ್ಕಾರ ಇವರ ಹೆಸರಿನಲ್ಲಿ ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಪೀಠ ಸ್ಥಾಪಿಸಿತು. ಬ್ಯಾಂಟಿಂಗನೇ ಅದರ ಮೊದಲ ಪ್ರಾಧ್ಯಾಪಕ. ಈತ 1941 ಫೆಬ್ರುವರಿ 21ರಂದು ನ್ಯೂಫೌಂಡ್‍ಲೆಂಡಿನ ತೀರದ ಬಳಿ ವಿಮಾನಾಪಘಾತದಲ್ಲಿ ಮಡಿದ.		(ಎ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ